ವಿಶ್ವೇಶ್ವರಯ್ಯ ನಾಲೆ
	ಕೃಷ್ಣರಾಜಸಾಗರದ (ಕೆಆರ್‍ಎಸ್) ಎಡದಂಡೆ ಯಲ್ಲಿ ನದೀಪಾತ್ರದಿಂದ 18.3 ಮೀ ಎತ್ತರದಲ್ಲಿರುವ ಇರ್ವಿನ್ ನಾಲೆಗೆ ಸ್ವಾತಂತ್ರ್ಯಾನಂತರ (1947) ಇಟ್ಟ ಹೊಸ ಹೆಸರು. ಮೈಸೂರು ನಗರದ ವಾಯವ್ಯಕ್ಕೆ 16 ಕಿಮೀ ದೂರದಲ್ಲಿದೆ ಕೆಆರ್‍ಎಸ್. ಇಲ್ಲಿ ಕಾವೇರಿನದಿಗೆ ಅಡ್ಡವಾಗಿ ಅಣೆಕಟ್ಟಿ (1931) ಈ ಜಲಾಶಯವನ್ನು ನಿರ್ಮಿಸಲಾಗಿದೆ. ಇದರ ನಿರ್ಮಾತೃ ಅಂದಿನ ಮೈಸೂರು ಸಂಸ್ಥಾನದ ಪ್ರಧಾನ ಅಭಿಯಂತ ರಾಗಿದ್ದ ಎಂ ವಿಶ್ವೇಶ್ವರಯ್ಯ (1860-1962). 

	ವಿಶ್ವೇಶ್ವರಯ್ಯ ನಾಲೆಯ ಒಟ್ಟು ಉದ್ದ 45.92 ಕಿಮೀ. ಇದರ ಕವಲುನಾಲೆ, ಸೀಳು ನಾಲೆಗಳ ಒಟ್ಟು ಉದ್ದ 303 ಕಿಮೀ. ಇದು ಈಗಿನ ಮಂಡ್ಯ ಜಿಲ್ಲೆಯ 77,200 ಹೆಕ್ಟೇರ್ ಭೂಮಿಯ ಸಾಗುವಳಿಗೆ ನೀರೊದಗಿಸುತ್ತದೆ. ಇದನ್ನು ಮೂರು ಪ್ರಮುಖ ಭಾಗಗಳಾಗಿ ವಿಂಗಡಿಸಬಹುದು : ಹುಲಿಕೆರೆವರೆಗಿನ 39.2 ಕಿಮೀ, ಹುಲಿಕೆರೆಯ ಸುರಂಗದ ಹಾಗೂ ತೋಡು ಭಾಗದ 6.6 ಕಿಮೀ ಮತ್ತು ಸುರಂಗಾ ನಂತರದ ಭಾಗ. ನಾಲೆಯ ಪ್ರಯೋಜನವಾಗುವುದು ಈ ಕೊನೆ ಭಾಗದಲ್ಲಿಯೇ. ಪ್ರಾರಂಭದಲ್ಲಿ ಇದರ ತಳದ ಅಗಲ 17.6 ಮೀ, ಆಳ 3.66 ಮೀ. ಇದು 6.4 ಕಿಮೀನಲ್ಲಿ ಕಟ್ಟೇರಿ ಹಳ್ಳವನ್ನೂ 14.4 ಕಿಮೀನಲ್ಲಿ ದಾಮದ ಹಳ್ಳವನ್ನೂ 38.4 ಕಿಮೀನಲ್ಲಿ ಲೋಕಪಾವನಿ ನದಿಯನ್ನೂ ಮೇಲ್ಗಾಲುವೆಗಳ ಮೂಲಕ ಹಾಯ್ದು ಹೋಗುತ್ತದೆ. ಇವೆಲ್ಲವೂ ಕಲ್ಲುಗಾರೆ ಮೇಲ್ಗಾಲುವೆಗಳು. ನಾಲೆಯ ಹಾದಿಯಲ್ಲಿ ಹುಲಿಕೆರೆಯ ಬಳಿ ಅಡ್ಡಬಂದ ಬೆಟ್ಟವನ್ನು ಕೊರೆದು ಸುರಂಗ ತೋಡಿ, ಅದರ ಮೂಲಕ ನಾಲೆಯನ್ನು ಹಾಯಿಸಲಾಗಿದೆ. ಇದರ ಹೆಸರು ಹುಲಿಕೆರೆ ಸುರಂಗವೆಂದಿತ್ತು. ಈಗ ಇದು ವಿಶ್ವೇಶ್ವರಯ್ಯ ಸುರಂಗವಾಗಿದೆ. 

	ವಿಶ್ವೇಶ್ವರಯ್ಯ ಸುರಂಗದ ಉದ್ದ 2.805 ಕಿಮೀ. ಇದು ಅಂಡಾಕಾರವಾಗಿದ್ದು, ಇದರ ಖಂಡ ವಿಸ್ತಾರ 16.2 ಚಮೀ. ಸುರಂಗದೊಳಗೆ ನೀರಿನ ವೇಗ ಸೆಕೆಂಡಿಗೆ 3.66 ಮೀ. ಸುರಂಗದ ಒಳ ಮೈಗೆ ಕಾಂಕ್ರೀಟನ್ನು ಲೇಪಿಸಿದೆ. ಸುರಂಗದ ಮುಂಚಿನ ತೋಡುಭಾಗದ ಉದ್ದ 1.4 ಕಿಮೀ. ಸುರಂಗಾನಂತರದ ತೋಡು ಭಾಗದ ಉದ್ದ 2.4 ಕಿಮೀ. ಮುಂದೆ ನಾಲೆ ಹಲವು ಕವಲುಗಳಾಗಿ ಹರಿದು, ವ್ಯವಸಾಯಕ್ಕೆ ನೀರೊದಗಿಸುತ್ತದೆ. ಕವಲುಗಳ ಹೆಸರುಗಳಿವು : ಮದ್ದೂರು, ಕಾವೇರಿ, ಕೆರಗೋಡು, ಲೋಕಸಾರ, ಹೆಬ್ಬಕವಾಡಿ, ಶಿಂಷ, ಕೌಡ್ಲೆ, ನಿಡಘಟ್ಟ, ತುರಗನೂರು ಮತ್ತು ಉಕ್ಕಲಗೆರೆ ಶಾಖೆ. ವಿಶ್ವೇಶ್ವರಯ್ಯ ನಾಲೆ ಮಂಡ್ಯ ಜಿಲ್ಲೆಯ ಜೀವನಾಡಿ.									
		(ಎಮ್.ಜಿ.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ